ಓದುವಗಿರಿಯ : - ಸು.1525. ವೀರಶೈವ ಕವಿ. ಹರಿಶ್ಚಂದ್ರ ಸಾಂಗತ್ಯ ಎಂಬ ಕಾವ್ಯದ ಕರ್ತೃ. ಇವನ ಗುರು ಕಂತೆಯ ದೇವ. ತಂದೆ ಕರಿಯ ಸೋಮನಪ್ಪ. ಕವಿ ತನ್ನನ್ನು ಗಿರಿಯ, ಓದುವ ಗಿರಿಯ ಎಂದು ಕರೆದುಕೊಂಡಿದ್ದಾನೆ. ಶ್ರೀಗಿರಿಯಮಲ್ಲೇಶನ ಚರಣಕಮಲಮಧುಕರ, ವರಕವಿಶರದಿಚಂದ್ರಮ ಎಂದು ವಿಶ್ಲೇಷಿಸಿ ಕೊಂಡಿರುವುದರಿಂದ ಶ್ರೀಗಿರಿಯಮಲ್ಲೇಶ ಕವಿಯ ಇಷ್ಟದೈವ ಎಂದು ತೋರುತ್ತದೆ. ಸಾನಂದಗಣೇಶಸಾಂಗತ್ಯ ಈತನ ಇನ್ನೊಂದು ಕೃತಿ. ಇದರಲ್ಲಿ ಬರುವ ಹರಿಣಪುರದ ಸಿಂಹಾಸನಾದೀಶ್ವರ ಗುರುಕೆಂಪನಂಜೇಶನ ಕರಜಾತ ನಂಜಯ್ಯ ಬರೆಸಿಹ ಹರಿಶ್ಚಂದ್ರಚರಿತೆ ಸಾನಂದ ಕೃತಿಯನು ಎಂಬ ಪದ್ಯದಿಂದ ಹರಿಣಪುರ ಸಿಂಹಾಸನಾದೀಶ್ವರ ಗುರುಕೆಂಪನಂಜೇಶನ ಕರಜಾತ ನಂಜಯ್ಯ ಈ ಎರಡೂ ಕೃತಿಗಳನ್ನು ಬರೆಸಿದಂತೆ ವ್ಯಕ್ತವಾಗುತ್ತದೆ. ಹರಿಶ್ಚಂದ್ರ ಸಾಂಗತ್ಯದಲ್ಲಿ ಧರೆಯೊಳದಿಕಪುಸ್ಥಾಪುರದೊಳೆಸೆವ ಎಂಬ ಮಾತು ಬಂದಿದೆ. ಈ ಅದಿಕಪುಸ್ಥಾಪುರವೆಂಬುದು ಈಗಿನ ದೊಡ್ಡಬಳ್ಳಾಪುರದ ಪರ್ಯಾಯನಾಮ ವಾದುದರಿಂದ ಕವಿ ಇದೇ ಊರಿನವನಾಗಿರಬಹುದು. ಈತ ಭಕ್ತಕವಿ, ಪೂರ್ವ ಕವಿಗಳಲ್ಲಿ ಬಾಣ, ಮಯೂರ, ಉದ್ಭಟ, ಕಾಳಿದಾಸ, ಹಂಪೆಯ ಹರೀಶ್ವರ, ಮಲುಹಣ, ರಾಘವಾಂಕ, ಹಲಾಯುಧ ಇವರನ್ನು ಸ್ಮರಿಸಿದ್ದಾನೆ.
ಹರಿಶ್ಚಂದ್ರಸಾಂಗತ್ಯ ಸಾಂಗತ್ಯದಲ್ಲಿ ರಚಿತವಾಗಿದೆ. ಇದರಲ್ಲಿ 6 ಸಂದಿಗಳೂ 441 ಪದ್ಯಗಳೂ ಇವೆ. ಹರಿಶ್ಚಂದ್ರನ ಕಥೆ ಕಾವ್ಯವಸ್ತು. ಈ ಕೃತಿಯ ಹೆಚ್ಚಿನ ಪ್ರತಿಗಳು ಅಲಭ್ಯವಾದುದರಿಂದ ಇದರ ಬಗೆಗೆ ಹೆಚ್ಚಿನ ಮಾಹಿತಿಗಳು ದೊರಕುವುದಿಲ್ಲ. ಕಾವ್ಯದ ಆದಿಯಲ್ಲಿ ರಾಘವಾಂಕನನ್ನು ಸ್ತುತಿಸಿರುವುದರಿಂದ ಈತ ತನ್ನ ಕೃತಿಯನ್ನು ರಚಿಸಿಲು ಹರಿಶ್ಚಂದ್ರ ಕಾವ್ಯವನ್ನು ಆಧರಿಸಿರಬಹುದೆಂದು ಊಹಿಸಲಾಗಿದೆ.
ಸಾನಂದಗಣೇಶಸಾಂಗತ್ಯ ಸಾಂಗತ್ಯದಲ್ಲಿದ್ದು ಇದರಲ್ಲಿ 6 ಸಂದಿಗಳೂ 432 ಪದ್ಯಗಳೂ ಇವೆ. ಸಾನಂದನೆಂಬ ಮುನಿ ನಾರಕಿಗಳನ್ನು ಉದ್ಧರಿಸಿದ ಕಥೆ ಇದರ ಕಥಾವಸ್ತು. ಕಾವ್ಯದಲ್ಲಿ 18 ವರ್ಣನೆಗಳೂ ನರಕಜೀವಿಗಳಿಗೆ ದೊರೆಯುವ ಹಿಂಸೆ, ಪುಣ್ಯಜೀವಿಗಳಿಗೆ ದೊರೆಯುವ ಉಪಚಾರ, ಭೋಗ, ಕೈಲಾಸಲೋಕ ಮೊದಲಾದವುಗಳ ವರ್ಣನೆಗಳೂ ಅಡಕವಾಗಿವೆ. ಕೆಲವು ಶಿವಶರಣರ ಕಥಾನಕಗಳ ಉಲ್ಲೇಖಗಳೂ ಇವೆ. ಸಾನಂದನ ಕಥೆ ಪುರಾಣೋಕ್ತ, ಸಂಸ್ಕೃತದಲ್ಲಿ ರಚಿತ ಎಂಬ ಪ್ರತೀತಿ ಇದ್ದರೂ ಇಲ್ಲಿ ಅದರ ಸುಳಿವೂ ಸಿಕ್ಕುವುದಿಲ್ಲ. ಕೆಲವು ವರ್ಣನೆಗಳು ಚೆನ್ನಾಗಿವೆ.        		        (ಆರ್.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ